|| हरे श्रीनिवास । हरि सर्वोत्तम । वायु जीवोत्तम । श्री गुरुभ्यो नमः ||
*NOTE: Choose desired output script using Aksharamukha (screen top-right).
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ||
ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ
ವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ
ಸಂಜೀತನಕ ಇದ್ದು ಸಣ್ಣ ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ
ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ ಭುಂಜಿಸುವದು ಮತ್ತೇನೋ ?
ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆ
ನಿಬ್ಬರದಲಿ ಸರ್ವರ ಕೂಡಿನ್ನು ಹಬ್ಬವನುಂಡೆನೊ ಹರಿಯೆ
ಮನೆಮನೆ ತಿರುಗಿದೆ ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು
ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ ಎನಗೆ ಪ್ರಾಪುತಿ ನೋಡೋ ಜೀಯ
ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯದಾದೆ
ಈ ಧರೆಯೊಳು ಸತ್ಪಾತ್ರರಿಗುಣಿಸುವ ಪದ್ಧತಿ ನೋಡೊ ಧರ್ಮಾತ್ಮ
ನೀಚೋಚ್ಛ ತಿಳಿಯದೆ ಸರ್ವರ ಚರಣಕೆ ಚಾಚಿದೆ ನೊಸಲು ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕೆ ನಿಲುಕದೊ ಹರಿಯೆ
ವೈದಿಕ ಪದವಿಯ ಕೊಡುವನಿಗೆ ಲೌಕಿಕನೈದಿಸುವುದು ಮಹಾಖ್ಯಾತಿ
ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ ಪಾದ ಸಾಕ್ಷಿ ಅನುಭವವೊ
